ಇತರ ಧಮ್ಮ ಪರಿಚಯ ಪುಟಗಳು
ನಿನ್ನ ಸ್ವಂತ ವಿವೇಚನಾಶಕ್ತಿ ಮತ್ತು ಆಂತರಿಕ
ತಿಳಿವಳಿಕೆಗೆ ಒಪ್ಪಿಗೆಯಾಗದ ಹೊರತು,
ಯಾವುದನ್ನೂ ನಂಬಬೇಡಿ;
ಯಾವ ಗ್ರಂಥದಿಂದ ಓದಿದರೂ ಸರಿಯೇ,
ಯಾರು ಹೇಳಿದರೂ ಸರಿಯೇ,
ನಾನು ಹೇಳಿದುದ್ದಾದರೂ ಸರಿಯೆ.

ಮನದ ಕಲ್ಪನೆಗಳನ್ನು
ಕಲ್ಪನೆಗಳಾಗಿಯೇ ಬಿಡುವುದಕ್ಕಿಂತ,
ಉದ್ಭವಿಸಿದ ಕಲ್ಪನೆಗಳನ್ನು
ಕಾರ್ಯರೂಪಕ್ಕೆ ತರುವುದು ಬಹಳ ಮುಖ್ಯ.

ಕ್ರೂರ ಪ್ರಾಣಿಗಳಿಗಿಂತ,
ಅಪ್ರಾಮಾಣಿಕ, ದುಷ್ಟ ಗೆಳೆಯರ ಸಹವಾಸ
ತುಂಬಾ ಭಯಾನಕವಾದದು,
ಕ್ರೂರ ಪ್ರಾಣಿ ದೇಹವನ್ನಷ್ಟೇ ಗಾಯಗೋಳಿಸಿದರೆ,
ದುಷ್ಟ ಗೆಳೆಯ ನಿಮ್ಮ ಮನಸ್ಸನ್ನೇ ಗಾಯಗೊಳಿಸುತ್ತಾನೆ.

ದ್ವೇಷದಿಂದ ದ್ವೇಷವನ್ನು ಅಳಿಸಲು ಸಾದ್ಯವಿಲ್ಲ.
ನಿಷ್ಕಾಮ ಪ್ರೇಮದಿಂದಷ್ಟೇ ಸಾಧ್ಯ.
ಇದು ಜಗತ್ತಿನ ಶಾಶ್ವತ ಚರಮ ನಿಯಮ.

ಕೋಪಗೊಳ್ಳುವುದೆಂದರೆ,
ಇದ್ದಲಿನ ಬೆಂಕಿಯನ್ನು ಬಿಗಿಯಾಗಿ ಹಿಡಿದು
ಇತರರ ಮೇಲೆ ಎಸೆಯಬೇಕೆಂಬ
ಉದ್ದೇಶ ಹೊಂದುವುದು; ಆದರೆ,
ಅದು ಸುಡುವುದು ಮೊದಲು ನಿಮ್ಮನ್ನೆ.

ಪವಿತ್ರತೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳದೆ,
ಎಷ್ಟೇ ಪವಿತ್ರ ಪದಗಳನ್ನು ಓದಿದರೂ,
ಎಷ್ಟೇ ಪವಿತ್ರ ಪದಗಳನ್ನೇ ನುಡಿದರೂ,
ಅವು ನಿಮಗೇನು ತಾನೇ ಒಳ್ಳೆಯದನ್ನು ಮಾಡಬಲ್ಲವು?

ತಲುಪುವುದಕ್ಕಿಂತ ಕ್ಷೇಮವಾಗಿ ಪ್ರಯಾಣಿಸುವುದು ಉತ್ತಮ.

ಬೆಂಕಿಯಿಲ್ಲದೆ ಜ್ಯೋತಿ ಹೇಗೆ ಬೆಳಗಲಾರದೋ
ಹಾಗೆಯೇ ಪ್ರಜ್ಞೆಯಿಲ್ಲದೇ ಮನುಷ್ಯನು ಬದುಕಲಾರ.

ನಮ್ಮನ್ನು ನಾವೇ ರಕ್ಷಿಸಿಕೊಳ್ಳಬೇಕು
ಯಾರೂ ನಮ್ಮನ್ನು ರಕ್ಷಿಸಲಾರರು.
ಯಾರಿಂದಲೂ ಸಾಧ್ಯವಿಲ್ಲ ಮತ್ತು
ಸಾಧ್ಯ ಮಾಡುವವರೂ ಇಲ್ಲ.
ನಮ್ಮ ದಾರಿಯ ದೂರವನ್ನು ನಾವೇ ಕ್ರಮಿಸಬೇಕು.

ಮನಸ್ಸೇ ಸರ್ವಸ್ವ.
ನೀನು ಏನು ಯೋಚಿಸುತ್ತೀಯೋ ಅದೇ ಅಗುತ್ತೀಯೆ.

ನಾಲಿಗೆಯು ಹರಿತವಾದ ಕತ್ತಿಯಂತೆ.
ನೆತ್ತರಿಲ್ಲದೆ ಹತ್ಯೆಮಾಡುವಂತಹದ್ದು

ಸನ್ಮಾರ್ಗವು ಆಕಾಶದ ಒಳಗೆಲ್ಲೂ ಇಲ್ಲ.
ನಿಮ್ಮ ಹೃದಯದೊಳಗೇ ಇದೆ.

ಒಂದು ಜ್ಯೋತಿಯಿಂದ
ಸಾವಿರ ಜ್ಯೋತಿಗಳನ್ನು ಹಚ್ಚಬಹುದು
ಹಾಗೆಯೇ ಜೀವನ ಜ್ಯೋತಿಯನ್ನು
ನಂದಿಸಬಾರದು. ಹಂಚಿಕೊಳ್ಳುವುದರಿಂದ
ಆನಂದವು ಎಂದೂ ಕಡಿಮೆಯಾಗದು.

ರಸತುಂಬಿದ ಚಮಚವು ಹೇಗೆ
ರುಚಿಯನ್ನು ಸವಿಯಲಾರದೋ,
ಹಾಗೆಯೇ, ಒಬ್ಬ ಅಜ್ಞಾನಿ,
ತನ್ನ ಜೀವನವಿಡೀ ಜ್ಞಾನಿಗಳ
ಜೊತೆ ಕಳೆದರೂ ಸತ್ಯವನ್ನು ಗ್ರಹಿಸಲಾರ.

ಎಲ್ಲಾ ಜೀವಿಗಳ ಅವಶ್ಯಕತೆಗಳನ್ನು ಪೂರೈಸುವ
ಸದ್ಗತಿ ಅಥವಾ ದುರ್ಗತಿಗಳನ್ನು ಕರುಣಿಸುವ
ಒಳ್ಳೆಯ ಅಥವಾ ಕೆಟ್ಟಕರ್ಮಗಳನ್ನು ನಿಯಂತ್ರಿಸುವ,
ತನ್ನಿಚ್ಚೆಯಂತೆ ಮಾನವ ಜೀವಿಯನ್ನು ದುಡಿಸಿಕೊಳ್ಳುವ
ಸರ್ವಶಕ್ತನಾದ ದೇವನೊಬ್ಬನಿರುವುದಾದರೆ...ಆ ದೇವರಿಗೂ
ಪಾಪದ ಕಲೆ ಅಂಟಿರಲೇಬೇಕು.

ಯಾವ ಮನುಷ್ಯನು ಭ್ರಷ್ಠನೋ ,
ಮದ್ಯಪಾನವ್ಯಸನಿಯೋ ,ಜೂಜುಗಾರನೋ
ಮತ್ತು ತನ್ನಲ್ಲಿರುವುದನ್ನೆಲ್ಲಾ ದುವ್ರ್ಯಯ
ಮಾಡುವವನೋ ಅಂತಹ ವ್ಯಕ್ತಿ ತನ್ನ ಅವನತಿಗೆ
ತಾನೇ ಕಾರಣನಾಗುತ್ತಾನೆ.

ಯಾರು ಹಿರಿಯರಿಗೆ ಸದಾ ಮನ್ನಣೆ
ಗೌರವಗಳನ್ನು ನೀಡುತ್ತಾನೋ,ಅವನಿಗೆ ನಾಲ್ಕು
ವರಗಳಾದ ಆಯಸ್ಸು ವೃಧ್ದಿ,ಸೌಂದರ್ಯ,
ಪರಮಸುಖ ಮತ್ತು ಶಕ್ತಿ ದೊರಕುತ್ತವೆ.

ಮನುಷ್ಯನು ಇತರರಿಗೆ ಸನ್ಮಾರ್ಗವನ್ನು
ಬೋಧಿಸುವ ಮೊದಲು ತಾನೇ ಅದನ್ನು
ಜೀವನದಲ್ಲಿ ಅಳವಡಿಸಿಕೊಳ್ಳಲಿ.

ಭಾವನಾತ್ಮಕ ನಂಬಿಕೆಗೆ ಗಂಟುಬಿದ್ದು
ಯಾರೂ ಏನನ್ನೂ ಒಪ್ಪಿಕೊಳ್ಳಬಾರದು.
ಏನನ್ನಾದರು ಒಪ್ಪಿಕೊಳ್ಳುವ ಮೊದಲು
ಸಾಮಾನ್ಯ ಪ್ರಜ್ಞೆಯನ್ನು ಬಳಸಿ ಚೆನ್ನಾಗಿ ಅರಿತುಕೊಳ್ಳಬೇಕು.

ಲಾಭ, ನಷ್ಠ,ಕೀರ್ತಿ,ಅಪಕೀರ್ತಿ ದುಃಖ
ಅನಿಶ್ಚಿತತೆ, ಈ ಭಾವಸ್ಥಿತಿಗಳು ಮಾನವ
ಜೀವಿಗಳಲ್ಲಿವೆ. ಆದರೆ, ಈ ಸ್ಥಿತಿಗಳು
ಶಾಶ್ವತವಲ್ಲ, ಬದಲಾವಣೆಗೆ ಒಳಪಟ್ಟಿರುವಂತಹವು.

ಮನಸ್ಸೇ ಜಗತ್ತನ್ನು ನಿಯಂತ್ರಿಸುತ್ತಿರುವುದು,
ಮನಸ್ಸೇ ಜಗತ್ತನ್ನು ವಿಕಾಸಗೊಳಿಸುತ್ತರುವುದು,
ಮನಸ್ಸೇ ಜಗತ್ತಿನಲ್ಲಿರುವ ಒಳ್ಳೆಯದು ಮತ್ತು ಕೆಟ್ಟದ್ದಕ್ಕೆ ಕಾರಣ.

ಅನೇಕ ವೇಳೆ, ಜನರು ತಾವು ಏನು
ನಿರೀಕ್ಷೆಗಳನ್ನಟ್ಟುಕೊಂಡಿರುತ್ತಾರೋ, ಅದರ
ವಿರುದ್ಧವಾಗಿಯೇ ಘಟನೆಗಳು
ಸಂಭವಿಸುತ್ತಿರುತ್ತ್ತವೆ. ಇದರಿಂದಾಗಿಯೇ
ನಿರಾಸೆಗಳು ಮೂಡುತ್ತಿರುತ್ತವೆ. ಈ
ಪ್ರಪಂಚದಲ್ಲಿ ಎಲ್ಲಾ ನಡೆಯುತ್ತಿರುವುದೇ ಹೀಗೆ.

ಹೆಣೆದ ಕೇಶರಾಶಿಯಿಂದಾಗಲಿ,
ವಂಶಪಾರಂಪರ್ಯತೆಯಿಂದಾಗಲಿ,
ಹುಟ್ಟಿನಿಂದಾಗಲಿ ಒಬ್ಬನು ಬ್ರಾಹ್ಮಣನಾಗಲಾರ;
ಯಾರಲ್ಲಿ ಸತ್ಯ ಮತ್ತು ಪ್ರಾಮಾಣಿಕತೆಯಿರುತ್ತದೆಯೋ ಅವನೇ ಬ್ರಾಹ್ಮಣ.

ಭಗವಾನ್ ಬುಧ್ದರ ನುಡಿರತ್ನಗಳು